ದತ್ತೂರಿ ಗಿಡ -
	ಪಪಾವರೇಸೀ ಕುಟುಂಬಕ್ಕೆ ಸೇರಿದ ಮುಳ್ಳುಗಿಡ. ಇದರ ವೈಜ್ಞಾನಿಕ ಹೆಸರು ಅರ್ಜಿಮೋನ್ ಮೆಕ್ಸಿಕಾನ. ಅಮೆರಿಕದ ಉಷ್ಣವಲಯ ಇದರ ತವರು. ಇದು ಭಾರತದ ಹವೆಗೆ ಹೊಂದಿಕೊಂಡಿದೆ. ಇಲ್ಲಿನ ಹಾನಿಕಾರಕ ಕಳೆಗಳಲ್ಲಿ ಇದೊಂದು. ರಸ್ತೆಗಳ ಪಕ್ಕದಲ್ಲಿ, ಹಾಳು ಭೂಮಿ ಮತ್ತು ಇತರೆ ಜಾಗಗಳಲ್ಲಿ ಬೆಳೆಯುವ ಏಕವಾರ್ಷಿಕ ಸಸ್ಯವಿದು. ಮುಳ್ಳಿನಿಂದ ಕೂಡಿದ ಊದಾಮಿಶ್ರಿತ ಹಸಿರು ಬಣ್ಣದ ಎಲೆಗಳು, ಮುಳ್ಳಿನಿಂದ ಕೂಡಿದ ಕಾಯಿಗಳು, ಅಚ್ಚಹಳದಿ ಬಣ್ಣದ ಹೂಗಳು ಮತ್ತು ಸಾಸಿವೆಯಂಥ ಬೀಜಗಳಿಂದ ಇದನ್ನು ಬಹು ಸುಲಭವಾಗಿ ಗುರುತಿಸಬಹುದು. ಈ ಗಿಡ ಸಾಮಾನ್ಯವಾಗಿ 2'-3' ಎತ್ತರಕ್ಕೆ ಬೆಳೆಯುವುದು. ಎಲೆಗಳು ಉದ್ದ ಹಾಗೂ ಕಿರಿಯಗಲದವು. ಎಲೆಯ ಅಂಚು, ಮೇಲ್ಮೈ ಮತ್ತು ಕಾಯಿಗಳ ಮೇಲೆ ಬಲು ಚೂಪಾದ ಮುಳ್ಳುಗಳಿವೆ. ಎಲೆಗಳ ನರಗಳೆಲ್ಲವೂ ಉದಾಬಣ್ಣದವಾಗಿದ್ದು ನೋಡಲು ಸುಂದರವಾಗಿವೆ. ಹೂಗಳು ಗಿಡದ ತುದಿಯಲ್ಲಿ ಅರಳುವುವು. ಹೂವಿನ ತೊಟ್ಟು ಹಾಗೂ ಪುಷ್ಪ ಪತ್ರಗಳ ಮೇಲೂ ಮುಳ್ಳುಗಳಿವೆ. ಹೂದಳಗಳು ಅಚ್ಚಹಳದಿ ಬಣ್ಣದವು. ಅವುಗಳ ನಸುಕಪ್ಪಾದ ನರಗಳು ಎದ್ದುಕಾಣುವಂತಿವೆ. ದಳಗಳು ಬಲುಬೇಗ ಉದುರಿಹೋಗುವುವು. ಕೇಸರಗಳ ಸಂಖ್ಯೆ ಅನಿಯಮಿತ. ಅಂಡಾಶಯ ಉಚ್ಚ ಸ್ಥಾನದ್ದು; 4-5 ಕಾರ್ಪೆಲ್‍ಗಳಿಂದ ಕೂಡಿದೆ. ಒಳಗೆ ಒಂದೇ ಕೋಣೆಯುಂಟು. ಈ ಕೋಣೆಯ ಒಳಗೋಡೆಯಿಂದ ಹುಟ್ಟುವ ತೆಳುಪೊರೆಯಂತಿರುವ ಪ್ಲಾಸೆಂಟಗಳ ಮೇಲೆ ಅಂಡಕಗಳು ಅಂಟಿಕೊಂಡಿವೆ. ಶಲಾಕೆ ಸಣ್ಣದು. ಫಲ ಸಂಪುಟ (ಕ್ಯಾಪ್ಸೂಲ್) ಮಾದರಿಯದು. ಒಳಗೆ ಸಣ್ಣಗಾತ್ರದ ಸಾಸಿವೆಯಂಥ ಬೀಜಗಳುಂಟು. ಕಾಯಿ ತುದಿಯಲ್ಲಿ ಬಿರಿದು ಪ್ರಾಣಿಗಳಿಂದ ಅಲುಗಾಡಿಸಲ್ಪಟ್ಟು ಬೀಜಗಳನ್ನು ಹೊರಚೆಲ್ಲುತ್ತವೆ. ಈ ಗಿಡ ಎಷ್ಟು ಸುಂದರವಾಗಿ ಕಾಣುತ್ತದೋ ಅಷ್ಟೇ ಹಾನಿಕಾರ ಕಳೆ. ಅದರೆ ಇದಕ್ಕೆ ಔಷಧಿಯ ಗುಣಗಳು ಉಂಟು. ಇದರ ಕಾಂಡ ಅಥವಾ ಎಲೆಗಳಿಗೆ ಬರುವ ನಸು ಹಳದಿ ಬಣ್ಣದ ಹಾಲು ಒಣಗಿಸಿದ ಮೇಲೆ ಅಫೀಮಿನಂತಾಗುತ್ತದೆ. ಅಫೀಮಿನಷ್ಟೇ ಮತ್ತು ಬರಿಸುವ ಗುಣ ಇದಕ್ಕೆ ಉಂಟು. ಚರ್ಮರೋಗಗಳನ್ನು ಗುಣಪಡಿಸಲು ಈ ಹಾಲನ್ನು ಬಳಸುತ್ತಾರೆ. ಇದಕ್ಕೆ ಮೂತ್ರಾಸ್ರಾವಕಗುಣವೂ ಉಂಟು. ದತ್ತೂರಿಯ ಬೀಜಗಳಿಂದ ಪಡೆಯಲಾಗುವ ನಸುಹಳದಿ ಬಣ್ಣದ ಎಣ್ಣೆಯನ್ನು ಸಾಸಿವೆ ಎಣ್ಣೆಯೊಂದಿಗೆ ಕಲಬೆರಕೆ ಮಾಡುವುದಿದೆ. ಆದರೆ ಇಂಥ ಕಲಬೆರಕೆ ಎಣ್ಣೆಯನ್ನು ಸುಲಭವಾಗಿ ಗುರುತಿಸಬಹುದು. (ಪ್ರಬಲ ನೈಟ್ರಿಕ್ ಅಮ್ಲವನ್ನು ಇಂಥ ಎಣ್ಣೆಗೆ ಸೇರಿಸಿದಾಗ ಅದು ಕಿತ್ತಳೆಕೆಂಪು ಬಣ್ಣಕ್ಕೆ ತಿರುಗುತ್ತದೆ). ಈ ತೆರನಾದ ಕಲಬೆರಕೆ ಎಣ್ಣೆಯೇ ಸಾಂಕ್ರಾಮಿಕ ಶೋಭೆ ರೋಗ ಬರಲು ಕಾರಣ ಎಂಬ ಅಭಿಪ್ರಾಯ ಉಂಟು. ಈ ಎಣ್ಣೆಯನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುವುದಿಲ್ಲ.

 	ಆದರೆ ಔಷಧಿಯನ್ನಾಗಿ ಬಳಸುತ್ತಾರೆ. ಕಜ್ಜಿ, ತುರಿ (ಹುರುಪು) ಮುಂತಾದ ಚರ್ಮರೋಗಗಳ ಚಿಕಿತ್ಸೆಯಲ್ಲಿ ಇದರ ಉಪಯೋಗ ಉಂಟು. ಇದಲ್ಲದೆ ಸುಲಿದ ಗಾಯಗಳನ್ನು ಮತ್ತು ಚರ್ಮದ ಮೇಲೆ ಮೂಡುವ ಹೊಪ್ಪಳೆಗಳನ್ನು ವಾಸಿಮಾಡಲೂ ಇದನ್ನೂ ಬಳಸುತ್ತಾರೆ. ಇದನ್ನು ಅಲ್ಪ ಪರಿಮಾಣದಲ್ಲಿ ಸೇವಿಸುವುದರಿಂದ ಹುಣ್ಣುಗಳನ್ನು ವಾಸಿಮಾಡಬಹುದೆಂದು ಹೇಳಲಾಗಿದೆ. ಆದರೆ ಹೆಚ್ಚಿನ ಪರಿಮಾಣದಲ್ಲಿ ಸೇವಿಸಿದರೆ ವಾಂತಿ ಮತ್ತು ಭೇದಿಯಾಗುವ ಸಂಭವ ಉಂಟು. ಉರಿಯುವ ಕಣ್ಣುಬೇನೆಯನ್ನು ತಂಪಾಗಿಸಲೂ ಈ ಎಣ್ಣೆಯನ್ನು ಉಪಯೋಗಿಸುವರು. 30 ಹನಿ ಎಣ್ಣೆಯನ್ನು ಒಂದು ಚಮಚ ಸಕ್ಕರೆಯೊಂದಿಗೆ ಸೇವಿಸುವುದರಿಂದ ಜಠರ ವ್ಯಾಧಿಗಳನ್ನು ಗುಣಪಡಿಸಬಹುದೆಂದು ಹೇಳಲಾಗಿದೆ. ಹಾವು ಕಡಿತಗಳಲ್ಲಿ ವಿಷಾಹಾರಿಯಾಗಿಯೂ ಬೀಜವನ್ನು ಬಳಸುತ್ತಾರೆ. ಅತಿ ಹೆಚ್ಚಿನ ತಲೆನೋವಿದ್ದಾಗ ಬೀಜವನ್ನು ಅರೆದು ಹಣೆಗೆ ಸವರುವುದುಂಟು.

	ಅಲ್ಲದೆ ದೀಪ ಉರಿಸುವುದಕ್ಕೂ ಯಂತ್ರಗಳ ಮೃದುಚಾಲಕ ಎಣ್ಣೆಯಾಗಿಯೂ (ಹೆರೆಯೆಣ್ಣೆ) ಎನ್ನು ಬಳಸುತ್ತಾರೆ. ಅಗಸೆ ಎಣ್ಣೆಯೊಂದಿಗೆ ಮಿಶ್ರಿಸಿ ಬಣ್ಣದ ಕಾರ್ಖಾನೆಗಳಲ್ಲಿ ಬಳಸುತ್ತಾರೆ. ಎಣ್ಣೆ ತೆಗೆದ ಹಿಂಡಿ ದನಗಳಿಗೆ ಮೇವಾಗಿಯೂ ಗೊಬ್ಬರವಾಗಿಯೂ ಉಪಯುಕ್ತವೆನಿಸಿದೆ.
(ಕೆ.ಎಸ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ